ಬುಧವಾರ, ಏಪ್ರಿಲ್ 6, 2011

ಹಿಂದಿನ  ಪೋಸ್ಟ್  ಗಮನಿಸಿದಿರಲ್ಲ ..
ಬನ್ನಿ....

ವೈಜ್ಞಾನಿಕ  ಮನೋಬಾವನೆ :                                               
`ಆರೋಗ್ಯ  ಕಲೆ ' (ಆರು+ಯೋಗ್ಯ) ಯ  ಆರು  ಯೋಗ್ಯ  ಸುರಕ್ಷಿತ  ಪಾಲನಾ  ಕ್ರಿಯೆಗಳನ್ನು  ಚಾಚೂ  ತಪ್ಪದೆ  ನಡೆಸಿಕೊಂಡು  ಹೋಗುವ  ಮತ್ತು  ಆರೋಗ್ಯ  ಸುಧಾರಣೆ   ಮಾಡಿಕೊಳ್ಳುವ  ವಿಧಾನವೇ  `ಆರೋಗ್ಯ ಕಲೆ'.
ವೈಜ್ಞಾನಿಕ  ಮನೋಬಾವನೆ -                                              
೧)  ಸಮಯಾನುಸಾರ  ದೇಹಸ್ಥಿತಿ, ನೈಸರ್ಗಿಕ  ಗುಣಮಟ್ಟದ  ಅರಿವು              
೨)  ಸಮರ್ಥ  ಆಹಾರ  ಪ್ರಜ್ಞೆ

೧)  ಸಮಯಾನುಸಾರ  ದೇಹಸ್ಥಿತಿ, ನೈಸರ್ಗಿಕ  ಗುಣಮಟ್ಟದ  ಅರಿವು-


ಆರೋಗ್ಯ  ಸುಧಾರಣೆಗೆ  ಮೊದಲನೆಯದಾಗಿ  ಸಾಂದರ್ಭಿಕ  ದೇಹದ ಸ್ಥಿತಿಯನ್ನು  ಅರಿತು  ಮುನ್ನಡೆಯಬೇಕು,

ನಾವು  ಆಹಾರ  ಸೇವಿಸುವ  ಸಮಯಕ್ಕಿಂತ  ಮುಂಚೆ,  ಅಂದರೆ  ಹಿಂದಿನ  ಸಮಯ  ಅಥವ  ಹಿಂದಿನ  ದಿನ  ಸೇವಿಸಿದ  ಆಹಾರ  ಏನು?  ಏಕೆ? ಎಷ್ಟು?  ಸೇವಿಸಿದ್ದೇವೆ  ಎಂಬದನ್ನು  ಅತ್ಯಲ್ಪ  ಸಮಯದಲ್ಲೇ  ಗಮನಕ್ಕೆ  ತೆಗೆದುಕೊಳ್ಳುವುದು,  

ನಂತರ  ಹೀಗೆ  ಸೇವಿಸಿದ  ಆಹಾರ ಆ  ದಿನದ  ದೇಹ ಶ್ರಮಕ್ಕೆ  ಸರಿದೂಗಿತೆ,  ಜೀರ್ಣಕ್ರಿಯೆ  ಫಲಿಸಿತೆ,  ಆಲಸ್ಯ, ಅಜೀರ್ಣತೆ,  ಜಠರ  ಗಟ್ಟಿಯಾದಂತಾಗುವುದು  ಮತ್ತು  ದೇಹದ  ಇತರ  ಯಾವುದೇ  ಅಂಗಾಂಗಗಳಲ್ಲಿ  ನೋವು  ಅಥವ  ಬಿಗಿತ  ಕಂಡುಬಂದಲ್ಲಿ  ಮೇಲ್ಕಾಣಿಸಿದ  ಸರ್ವೇ  ಸಾಮಾನ್ಯವಾಗಿರುವ ನಂಬಿಕೆ  ಅಪನಂಬಿಕೆಯ  ನಡವಳಿಕೆಗಳಿಗೆ  ಅವಲಂಬಿತವಾಗದೆ  ಇವುಗಳ  ಮೂಲ ಸೂಕ್ಷ್ಮ ಕಾರಣವನ್ನು  ಅರಿಯಲು  ಪ್ರಯತ್ನಿಸುವುದು,

ಹೀಗೆ  ದೇಹದ  ಯಾವುದೇ  ಅಂಗಾಂಗದಲ್ಲಿ  ಅನಾರೋಗ್ಯದ  ಬಗ್ಗೆ  ಒಂದು  ಸಣ್ಣ  ಸಮಸ್ಯೆ  ಕಂಡುಬಂದರೂ  ಕೆಳಗೆ  ಕಾಣಿಸಿದ  ಯಾವುದೇ  ಮೂಲ  ಕಾರಣವಿರಬಹುದು -

ಸೇವಿಸಿದ  ಆಹಾರವು  ಸುಲಭವಾಗಿ  ಜೀರ್ಣವಾಗಲು  ದೇಹ  ಯಾವುದೇ  ರೀತಿಯ  ಶ್ರಮದ  ಕೆಲಸ  ಮಾಡದೇ ಇದ್ದಿರಬಹುದು,
ಆಕಸ್ಮಿಕವಾಗಿ  ಪ್ರಕೃತಿಯ  ವಾತಾವರಣದಿಂದಲೂ  ಅನಾರೋಗ್ಯದ  ಸಮಸ್ಯೆಗೆ  ಕಾರಣವಾಗಿರಬಹುದು,  ಇಲ್ಲವೇ ..
ಯಾವುದೇ  ಒಂದು  ನಿರ್ಧಿಷ್ಟ  ಆಹಾರವನ್ನೇ  ಪದೇ  ಪದೇ  ಅತಿಯಾದ  ಆಸೆಯಿಂದ  ಸೇವಿಸಿರಬಹುದು,
ಸೇವಿಸಿದ  ಆಹಾರ  ಸುಲಭವಾಗಿ  ಜೀರ್ಣಿಸಲು,  (ಸೇವಿಸಿದ  ಆಹಾರಕ್ಕೆ  ತಕ್ಕಂತ  ಪ್ರಮಾಣದಲ್ಲಿ)  ಸಾಕಷ್ಟು  ಶುದ್ಧ  ನೀರನ್ನು  ಸೇವಿಸದೇ  ಇದ್ದಿರಬಹುದು.

ಹಾಗೆಯೇ  ನೈಸರ್ಗಿಕ  ಗುಣಮಟ್ಟದ  ಸ್ಥಿತಿಯನ್ನು  ಅರಿಯಲು  ಪ್ರಯತ್ನಿಸಬೇಕು ... ಅಂದರೆ -

ಆಹಾರ  ಸೇವಿಸುವ  ಸಂದರ್ಭದಲ್ಲಿ   ಪ್ರಕೃತಿಯ  ಹವಾಮಾನದ  ಗುಣಮಟ್ಟವು,  ಚಲಿಗಾಲದ-ಅತಿ  ಹೆಚ್ಚು  ತಂಪು  ಹವಾಮಾನವಿದೆಯೇ, ಬೇಸಿಗೆ  ಕಾಲದ  ಅತಿ ಹೆಚ್ಚು  ಉಷ್ಣ  ಹವಾಮಾನವಿದೆಯೇ  ಮತ್ತು  ಮಳೆಗಾಲದಲ್ಲೂ  ಹವಾಮಾನದ ಸ್ಥಿತಿ  ಹೀಗೆ  ಎಲ್ಲ ಹವಾಮಾನವನ್ನು  ಗಮನಿಸುವುದು  ಸಂದರ್ಭಕ್ಕೆ  ತಕ್ಕ  ಆಹಾರ  ಸೇವಿಸಲು  ಮುಂಜಾಗ್ರತಾ  ಕ್ರಮವಾಗುತ್ತದೆ .

`ಮನ  ಬಂದಂತೆ  ಆಹಾರ  ಸೇವಿಸುವುದು  ಮನಸಿಗೆ  ಹಿತ, 
  ಮತಿಯಿಂದ  ಆಹಾರ  ಸೇವಿಸುವುದು  ಹೊಟ್ಟೆಗೆ  ಹಿತ,
  ಮನ  ಮತಿ  ಒಂದಾದರೆ  ಉತ್ತಮ  ಆರೋಗ್ಯವೂ  ಸನ್ನಿ ಹಿತ'

ಮುಂದಿನ  ಪೋಸ್ಟ್ ಗೆ   ಹೋಗಿ ....







ಮಂಗಳವಾರ, ಡಿಸೆಂಬರ್ 15, 2009

ಮಾನಸಿಕ ಭೂತ
ಮೊದಲ ಪೋಸ್ಟ್ ನೋಡಿದ್ರ.. 
ಬನ್ನಿ....

ಇದೇನಪ್ಪಾ..ಇದು ..ಹೊಸ ಪದ ಕೇಳ್ತಾ ಇದ್ದಂಗ್ ಐತಲ್ಲಾ ಅಂತ ಅನಿಸ್ತಿದಿಯಾ ..`ಆರೋಗ್ಯ ಕಲೆ ' ಈಗ ಹೊಸ ಪದವೇ ಆಗಿರಬಹುದು ಮತ್ತು ಈ ತಾತ್ವಿಕ  ಅಂಶಗಳ ವಿಧಾನವು ಸಹ ಹೊಸತು ಅನ್ನಿಸಬಹುದು,ಆದರೆ ಈ ಆಧುನಿಕ ಜೀವನದ ಅವುಷಧದ  ಉಪಚಾರಕ್ಕಿಂತಲೂ ಮೊದಲು ಕಳೆದ ಸಾವಿರಾರು ವರ್ಷಗಳ ಹಿಂದಿನ ಜನ  ಜೀವನದಲ್ಲಿ ಒಬ್ಬರಿಂದ ಒಬ್ಬರಿಗೆ ಅನುಕರಣೆ ರೂಪದಲ್ಲಿ ತಮ್ಮ ಬುದ್ಧಿವಂತಿಕೆಯಿಂದ ತಮ್ಮ ತಮ್ಮ ಯೋಗ ಕ್ಷೇಮವನ್ನು ಕಾಪಾಡಿಕೊಂಡು,ಮದ್ದು ಉಪಚಾರವು ತೀರ ವಿರಳವಾಗಿರುತ್ತಿದ್ದವು ಎಂಬ ಸಂಗತಿ ಇತಿಹಾಸ ಪ್ರಜ್ಞರ ಮೂಲಕ ಅರಿತ ಎಲ್ಲ  ಸಾಮಾನ್ಯ ವ್ಯಕ್ತಿಗಳಿಗೂ ತಿಳಿದ ವಿಷಯ,ಈ ಬಗ್ಗೆ ಭಿನ್ನ ಅಭಿಪ್ರಾಯದ ಕಡೆ  ವಾಲುವುದು ಸೋಜಿಗವೆಂದು ನನಗೆ ಅನಿಸುತ್ತದೆ. ಆದರೆ ಆ ಹಿಂದಿನ ಯೋಗಕ್ಷೇಮ  ವಿಧಾನ ಈಗಲೂ ಉಳಿದುಕೊಂಡು ಬಂದಿದ್ದರೆ,ಈಗಿನ ಆಧುನಿಕ ಅವುಷಧ ಉಪಚಾರಕ್ಕೆ ಈಗಿನಂತ ಬೆಲೆ ತೆತ್ತಬೇಕಾಗಿತ್ತೆ .

ಮತ್ತೆ ..ಬೇಡಿದಷ್ಟು ಬೆಲೆ ತೆತ್ತಲೇಬೇಕು,ಯಾಕೆ ಹೇಳಿ ?

ಹಣ ಖರ್ಚು ಆಗದೆ ಹಾಗೆ ಖಾಯಿಲೆ ವಾಸಿ ಆಗ್ತದಾ?
ಹೋಗ್ಲಿ,ವಾಸಿ ಆಗ್ಲಪ್ಪ ಅಂತ ಧ್ಯಾನ ಮಾಡೋ ತರ ಹೇಳ್ಕೋತಾ ಕೂತರೆ,ವಾಸಿ ಆಗುತ್ತಾ?
ಹೋಗ್ಲಿ ಬಿಡ್ರಿ, ಬರೋ ದುಡ್ಡು ಎಂಗ್ ಖರ್ಚ್ ಆಗ್ಬೇಕು ..
ಇಲ್ಲ..ನಮ್ಮ ಖಾಯಿಲೆ ನಾವೇ ವಾಸಿ ಮಾಡ್ಕೊಳ್ಳೋಕೆ ನಾವೇನಾದ್ರು ವೈದ್ಯರೇ.. ಪಂಡಿತರೆ..
ಇಲ್ಲ ಇಲ್ಲ ಇರೋದ್ ಒಂದೇ ದಾರಿ,ಯಾರೋ ಮಾಟ ಮಾಡ್ಸೀದಾರೆ....ಅಲ್ಲೇ....

ಈ ರೀತಿ ನಂಬಿಕೆ ಅಪನಂಬಿಕೆಯ ನಡೆವಳಿಕೆಗಳು ಸರ್ವೇ ಸಾಮಾನ್ಯ,ಯಾಕೆ ಹೇಳಿ?

ಇದರ ಹಿಂದೆ ಪಂಚ ಜ್ಞಾನ ಇಂದ್ರಿಯಗಳನ್ನು ಅಶುದ್ಧತೆಗೊಳಿಸಲು ಮಾನಸಿಕವಾಗಿ  ಆಕರ್ಷಿತವಾಗುವಂತ ದುರಾಸೆ ಎಂಬ ಮನಸಿನ ಭೂತ ಅಡಗಿರುತ್ತದೆ-

ಹಣದ ಆಸೆ, ನಾಲಿಗೆ ರುಚಿಯ ಆಸೆ, ಹೊರಗಿನ ಕಂಡ ಕಂಡ ತಿನಿಸುಗಳನ್ನು  ಸೇವಿಸುವುದು,
ಜಾಹಿರಾತುಗಳಿಗೆ ಆಕರ್ಷಣೀಯರಾಗಿ ವಿವಿಧ ರೀತಿಯ ಉತ್ಪಾದಿತ ಹೊಸ  ತಿನಿಸುಗಳನ್ನು ಮಿತಿಮೀರಿ ಸೇವಿಸುವುದು,
ಕೆಲಸದ ಒತ್ತಡ,ಖಾಯಿಲೆ..ಇದೇನು ಬರುತ್ತೆ,ಹೋಗುತ್ತೆ..ಎಂಬ ನಿರ್ಲಕ್ಷತನದ  ಅಭ್ಯಾಸ,
ಆರೋಗ್ಯದ ಕಡೆ ಗಮನ ಹರಿಸದಿರುವುದು, ಆರೋಗ್ಯ ಸುಧಾರಿಸಿಕೊಳ್ಳುವ ಮತ್ತು  ವೈಜ್ಞಾನಿಕ ಮನೋಭಾವನೆಯ ಕೊರತೆ,
ಇವು ಮನಸ್ಸು ಮನಬಂದಂತೆ ನಡೆದುಕೊಳ್ಳುವ ರೀತಿಯೇ ಅನಾರೋಗ್ಯಕ್ಕೆ  ಕಾರಣವಾಗದಿರಲಾರವೇ?
ಇಷ್ಟಕ್ಕೆ ಮಾತ್ರವೇ ಆರೋಗ್ಯ ಅನಾರೋಗ್ಯಕ್ಕೆ ಈಡಾಗುವುದು ಎಂದು ಭಾವಿಸಬೇಡಿ,

ಮನೆಯಲ್ಲಿ ತಯಾರಿಸಿದ ಶುದ್ಧ ಆಹಾರದಿಂದಲೂ ದೊಡ್ಡ ಖಾಯಿಲೆಗಳಿಗೆ ಈಡಾಗುವ  ಸಾಧ್ಯತೆಗಳಿವೆ, ಅದು ಹೇಗೆ?

ಅದು ಹೀಗೆಯೇ-ವೈಜ್ಞಾನಿಕ ಸಂಶೋಧನೆಯ ಪ್ರಕಾರ ಒಬ್ಬ ವ್ಯಕ್ತಿಯ ಆರೋಗ್ಯ  ಸುಸ್ಥಿತಿಯಲ್ಲಿರಬೇಕೆಂದರೆ ಶುದ್ಧರಕ್ತವಿರಬೇಕು ಮತ್ತು ರಕ್ತದ ಒತ್ತಡವೂ ಸಹ ಹೆಚ್ಚು, ಕಡಿಮೆಯಾಗದ ರೀತಿಯಲ್ಲಿ ಸಾಧಾರಣ ಸ್ಥಿತಿಯಲ್ಲಿರಬೇಕು, ಅಂದರೆ ಈ  ಸುಸ್ಥಿತಿಯಲ್ಲಿ  ಅತ್ಯಂತ ಕನಿಷ್ಠ ಮಟ್ಟದಲ್ಲೂ ಲೋಪ ದೋಷ ಉಂಟಾದರೂ,ಶುದ್ಧರಕ್ತ ಮತ್ತು ರಕ್ತದ  ಒತ್ತಡದಲ್ಲಿ ಏರುಪೇರು (ಬದಲಾವಣೆ) ಆಗುವುದು ಹಾಗೆಯೇ ಅನಾರೋಗ್ಯಕ್ಕೆ (ದೊಡ್ಡ ಖಾಯಿಲೆಗೂ) ಹಾದಿ ಸುಗಮವಾಗಬಲ್ಲದು ಎಂಬ ಅಂಶವನ್ನು ಸಾಮಾನ್ಯ ಜ್ಞಾನ  ಮಟ್ಟದಲ್ಲೂ ಆಲೋಚನೆಯ ಮೂಲಕ ಅರಿತುಕೊಳ್ಳಬಹುದಾಗಿದೆ ಮತ್ತು ಉತ್ತಮ ಆರೋಗ್ಯ ಸುಧಾರಣೆಗೆ ಈ ಅಂಶವೇ ಕೇಂದ್ರ ಬಿಂದುವಾಗಿದೆ ಎಂಬುದನ್ನು ಸದಾ  ಮಾನಸಿಕವಾಗಿ ಮನದಟ್ಟು ಆಗಿರಬೇಕಾದ ವಿಷಯವೂ ಆಗಿದೆ.

`ನನ್ನ ದೇಹ,ನನ್ನ ಹೊಟ್ಟೆ,ನನ್ನ ದುಡ್ಡು,ಬೇಕಾದ್ದನ್ನ ತಿನ್ನೋದು ನನ್ನಿಷ್ಟ...
          
ಆದರೆ, ನಂದೇ ದೇಹ,ನಂದೇ ಹೊಟ್ಟೆ,ನಂದೇ ದುಡ್ಡು,ಬೇಕಾಬಿಟ್ಟಿ ಆರೋಗ್ಯ ಕೆಟ್ರೆ... ಎಷ್ಟು ಕಷ್ಟ...ಯಾರಿಗೆ ಕಷ್ಟ...

ಹಿತ ಮಿತ ಸೇವನೆಗೆ ಒಂದು ಶಿಸ್ತು ಇರಲಿ, ಈ ಶಿಸ್ತಿನ ಮುಂಜಾಗ್ರತಾ ಅರಿವಿಗೆ  ಮಾತ್ರ ವೈಧ್ಯರ ಸಲಹೆ ಇರಲಿ...ಅಲ್ಲವೇ' 

ಅದಕ್ಕಾಗಿಯೇ`ಆರೋಗ್ಯ ಕಲೆ' ಎಂಬ ಸುರಕ್ಷಿತ ಪಾಲನೆಯನ್ನು ಸುರಕ್ಷಿತವಾಗಿಯೇ  ನಡೆಸಿಕೊಂಡು ಹೋದಲ್ಲಿ ಉತ್ತಮ ಅರೋಗ್ಯ ಸುಧಾರಣೆಯ ಹಾದಿಯಲ್ಲೇ  ಕ್ಷೇಮವಾಗೆ ನಡೆಯಬಹುದು ಎಂಬುದನ್ನು ನೀವೇ ಅರಿತುಕೊಳ್ಳಬಹುದಾಗಿದೆ.

ಮುಂದಿನ ಪೋಸ್ಟ್ ಗೆ ಹೋಗಿ...









ಭಾನುವಾರ, ಡಿಸೆಂಬರ್ 6, 2009

AAROGYA KALE

ಆರೋಗ್ಯ  ಕಲೆ


ವ್ಯಕ್ತಿ ತನ್ನ ಜೀವನದ ಎಲ್ಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸುಸಜ್ಜಿತ ದೈಹಿಕ ವ್ಯವಸ್ಥೆಯೊಂದಿಗೆ ತನ್ನ ಬೆಳೆವಣಿಗೆಯ ಸಹಾಯದಿಂದ ತಾನೇ  ಸ್ವಯಂಚಾಲಿತ ಸಾಮರ್ಥ್ಯವನ್ನು ಪಡೆದಿರುತ್ತಾನೆ. ಜ್ಞಾನ ಸಂಪಾದನೆಗೆ ಮತ್ತು ಸುಪ್ತ ಜ್ಞಾನವನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಪಡೆಯಲು  ಪಂಚ ಜ್ಞಾನ ಇಂದ್ರಿಯಗಳನ್ನು ಹೊಂದಿದ್ದಾನೆ. ಈ ಎಲ್ಲ ದೈಹಿಕ ವ್ಯವಸ್ಥೆಯು ಮಾನವನಿಗೆ  ಅಲ್ಲದೆ ಪ್ರತಿ ಜೀವಿತ ವಸ್ತುಗಳಿಗೂ ಪ್ರಕೃತಿಯಿಂದಲೇ  ಸೃಷ್ಥಿಯಾಗಿರುವುದಲ್ಲದೆ,ಈ ಸೃಷ್ಥಿಯಲ್ಲಿಯೂ ಸಹ ಅವಶ್ಯ ಆಕಾರ,ಅಳತೆ,ಪ್ರಮಾಣಗಳೊಂದಿಗೆ ವೈಜ್ಞಾನಿಕ,ತಂತ್ರಜ್ಞಾನ ಮತ್ತು ಚಿಂತನೆ  (ಕಲಾತ್ಮಕ) ಯ ಅಂಶಗಳ ಸಂಯೋಜನೆಯ ಕ್ರಿಯಾ ವಿಧಾನದ ಮೂಲಕವೇ ಪುನಃ ಪರಿವರ್ತಿತ ಬೆಳವಣಿಗೆಯ ಕೊಡುಗೆಯಾಗಿದೆ ಎಂದರೆ  ತಪ್ಪಾಗಲಾರದು.ಇಷ್ಟೇ ಅಲ್ಲದೆ ಗಾಳಿ,ಬೆಳಕು,ನೀರು ಮತ್ತು ಪ್ರತಿ ಎಲ್ಲ ಆಯಾ ಜೀವಿತ ವಸ್ತುಗಳಿಗೆ ತಕ್ಕಂತೆ ಆಹಾರ ಸಾಮಗ್ರಿಗಳು ಮತ್ತು ಈ  ಆಹಾರವನ್ನು ಅತಿಯಾಗಿ ಸೇವಿಸಿದಲ್ಲಿ ರೋಧಕ ಮತ್ತು ವ್ಯತಿರಿಕ್ತ ನಿರೋಧಕ ಉಂಟು ಮಾಡುವಂತ ಜೀವನಾಂಶಗಳಿರುವ ಈ ಎಲ್ಲ ಬೆಳೆಗಳನ್ನು  ಬೆಳೆಯುವ ಮೂಲಕ ಪ್ರಕೃತಿಯೇ ನೀಡುತ್ತಿದ್ದರು ಈ ಸೃಷ್ಥಿಯಲ್ಲಿ ಯಾವುದಾದರೂ ಅಶುದ್ಧತೆ,ಅನಾವಶ್ಯಕ,ಅಸಮರ್ಪಕ ಲೋಪ ದೋಷವೆನಾದರೂ ಇವೆಯೇ? ಆದರೆ ಲೋಪ ದೋಷಗಳಿರುವುದು ಮಾನವನ ನಡೆವಳಿಕೆಗಳಲ್ಲಿ,ಅತಿಯಾದ ಆಸೆಗಳಲ್ಲಿ.ಆಹಾರಗಳ ಬಗ್ಗೆ ವೈಜ್ಞಾನಿಕ  ಮನೋಬಾವನೆ, ಆರೋಗ್ಯಕ್ಕಾಗಿ ಆಹಾರ ಬಳಕೆಯ ಬಗ್ಗೆ ತಂತ್ರಜ್ಞಾನ,ಆಹಾರ ಬಳಕೆಯ ನಂತರ ಸೇವಿಸಿದ ಆಹಾರದಿಂದಾಗುವ ಪರಿಣಾಮ ಮತ್ತು ಪಚನ ಕ್ರಿಯೆಯ ಮಾರ್ಗದ ಅರಿವಿನ ಕೊರತೆ. ಅಂದು ಅವುಷಧಿಯ ಪರಿಚಯವೇ ಅಪರೂಪ,ಇಂದು ಅವುಷಧಿಯೇ ಆಹಾರದ ರೂಪ. ಅದಕ್ಕೆಂದೇ ಇಂದು ವ್ಯಕ್ತಿ  ತನ್ನ ಸಂಪೂರ್ಣ ಆರೋಗ್ಯದ ಉಸ್ತುವಾರಿಯನ್ನು ಅವುಷದೋಪಚಾರಕ್ಕೆ ಕೊಟ್ಟು ಪರಾವಲಂಬಿಯಾಗಿದ್ದಾನೆ.

ತಮ್ಮ ಜ್ಞಾನ ಇಂದ್ರಿಯಗಳು  ತಮ್ಮ ಹಿಡಿತದಲ್ಲಿದ್ದು ಶುದ್ಧ,ಸ್ವಚ್ಛ ಸುಸ್ಥಿತಿಯಲ್ಲಿದ್ದು ಯಾವ ಲೋಪದೋಷಗಳಿಲ್ಲದೆ ಸೂಕ್ಷ್ಮವಾಗಿ ತಮ್ಮ ತಮ್ಮ  ಕಾರ್ಯವನ್ನು ತಾವೇ ನಿರ್ವಹಿಸಿದರೆ ಮಾತ್ರ ವ್ಯಕ್ತಿಯು ದೈಹಿಕವಾಗಿ ಆರೋಗ್ಯವಂತನಾಗಿಯು ಹಾಗು ಮಾನಸಿಕವಾಗಿ ಕಲಾವಂತನಾಗಿಯು  ಕಾಣಲು ಸಾಧ್ಯ.

ಸ್ವಯಂಚಾಲಿತ  ದೈಹಿಕ ವ್ಯವಸ್ಥೆಯಲ್ಲಿ ಜ್ಞಾನ ಇಂದ್ರಿಯಗಳು ಹಾಗು ಮನಸ್ಸು ಎರಡು ಪರಸ್ಪರ ಪೂರಕ ವರ್ತನೆಗೆ ಕಾರಣಗಳಾಗಿವೆ. ಮನಸ್ಸಿನ  ಕ್ರಿಯೆಗೆ ಜ್ಞಾನ ಇಂದ್ರಿಯಗಳ ಸ್ವಚ್ಚತೆ,ಜ್ಞಾನ ಇಂದ್ರಿಯಗಳ ಸ್ವಚ್ಚತೆಗೆ ಮನಸ್ಸಿನ ಜ್ಞಾನದ ಪ್ರಕ್ರಿಯೆ. ಈ ವ್ಯವಸ್ಥಿತ ರೂಪುರೇಷೆಗಳು ನಿತ್ಯ  ಕ್ರಮಬದ್ಧವಾಗಿ ನಡೆಸುವ ಕಾರ್ಯ ಸ್ವತಃ ಮನಸ್ಥೈರ್ಯ,ಸಾಮರ್ಥ್ಯ,ಚಿಂತನೆಗಳ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇಭದ್ರ ಬುನಾದಿಯಾಗಿ  ರೂಪಿತವಾಗಬೇಕು. ಕಲಾತ್ಮಕವಾದ ಒಂದು ಸ್ವ ಜ್ಞಾನ ಮಾಪನದಂತೆ  ಸೃಜನಶೀಲತೆಯಾಗಿ ಬೆಳೆಯಬೇಕು. ಆಗ ದೇಹಸ್ಥಿತಿಯಲ್ಲಾಗುವ  ಅನಾರೋಗ್ಯದ ಲಕ್ಷಣಗಳ ಸೂಚನೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಮೂಲಕ ಆಗುವ ಅನುಭವ,ಮತ್ತು ಈ ಸಾಮರ್ಥ್ಯವು ಬೇರೆ ಯಾವುದೇ  ಪರೀಕ್ಷಾ ಮಾಪನದಿಂದ ಪರೋಕ್ಷವಾಗಿ ದೊರೆಯುವ ಮಾಹಿತಿಗಳಿಗಿಂತ ಸ್ಪಷ್ಟ ಪರಿಪೂರ್ಣ ಮಾಹಿತಿಗಳು ಪ್ರತ್ಯಕ್ಷ ಮಾಹಿತಿಗಳಂತೆ  ಆಂತರಿಕವಾಗಿ ತಮಗೆ  ಗೋಚರಿಸುವುವು. ಈ ಮಾಹಿತಿ ಜ್ಞಾನಕ್ಕಾಗಿಯೇ ಆರೋಗ್ಯ ಸುಧಾರಣೆಯ ಆರು ಯೋಗ್ಯ ಪರಿಕಲ್ಪನೆಗಳನ್ನು ಪಂಚ  ಜ್ಞಾನ ಇಂದ್ರಿಯಗಳ  ಸಹಾಯದಿಂದ ಅರಿತು ಪಾಲಿಸುವ ಕ್ರಿಯೆಯೇ `ಆರೋಗ್ಯ  ಕಲೆ '.

ಆರೋಗ್ಯ  ಕಲೆ:
 ಕ್ರಿಯಾ ವಿಧಾನದ ತಾತ್ವಿಕ ಅಂಶಗಳು -


ವೈಜ್ಞಾನಿಕ ಮನೋಬಾವನೆ :                                               
1)  ಸಮಯಾನುಸಾರ ದೇಹಸ್ಥಿತಿ,ನೈಸರ್ಗಿಕ ಗುಣಮಟ್ಟದ ಅರಿವು              
2)  ಸಮರ್ಥ ಆಹಾರ ಪ್ರಜ್ಞೆ


ತಂತ್ರ ಜ್ಞಾನ:
1)  ಸಮಯ ಪಾಲನೆ ಹಾಗು ಸುಚಿತ್ವ ಪಾಲನೆ
2)  ಸಾಮಾನ್ಯ ಪಚನಕ್ರಿಯೆ ಮಾರ್ಗದ ಅರಿವು                                            


ಚಿಂತನೆ: (ಕಲೆ)
1)  ಸಮತೋಲನ ಆಹಾರ ಸೇವನೆ
2)  ಸಮಯೋಚಿತ ವರ್ತನೆ.